Sunday, 10 March 2013


                      ಕಣ್ಣಿನ ಹಳದಿ

ಪಶ್ಚಿಮಘಟ್ಟಗಳ ನಡುವೆ ಬಸ್ಸೊಂದು ತಂಪು ಗಾಳಿಯನ್ನು ಸೀಳಿಕೊಂಡು ಶರವೇಗದಲ್ಲಿ ಮುನ್ನುಗ್ಗುತ್ತಿತ್ತು.ಬಸ್ಸಿನೊಳಗಿದ್ದ ಕೆಲವರು ಆರಾಮಾಗಿ ನಿದ್ರಿಸುತ್ತಿದ್ದರು.ಕೆಲವರು ಪುಸ್ತಕಗಳನ್ನು ಓದುತ್ತಿದ್ದರು.ಇನ್ನು ಕೆಲವರು ಕಿಟಕಿಯಾಚೆಗಿನ ಸೌಂದರ್ಯವನ್ನು ಸವಿಯುತ್ತಿದ್ದರು.ಇವ್ಯಾವು ಗೋಜಿಗೆ ಸಿಲುಕದೇ ಬಸ್ ಡ್ರೈವರ್ ಬಸ್ ಚಾಲನೆ ಮಾಡುತ್ತಿದ್ದ.

   ಇದ್ದಕ್ಕಿದ್ದಂತೆ ಮುಸ್ಲಿಂ ದಂಡುಕೋರರು ಬಸ್ಸಿನೊಳಗೆ ನುಗ್ಗಿ ಸಿಕ್ಕಸಿಕ್ಕ ಮುಸ್ಲಿಮರನ್ನು ಕೊಚ್ಚಿಹಾಕುತ್ತಿದ್ದರು.ಬಸ್ಸಿನ ಕೊನೆಯ ಸೀಟಿನಲ್ಲಿ ಕುಳಿತಿದ್ದ  ಒಬ್ಬ ಮುಸ್ಲಿಮ್ ಪಕ್ಕದಲ್ಲೇ ಇದ್ದ ಹಿಂದೂ ಮಗುವಿಗೆ ತನ್ನ ಬಿಳಿ ಟೋಪಿಯನ್ನು ಹಾಕಿ ಕುಳಿತ.ಬಂದ ದಂಡುಕೋರರು ಈತನನ್ನು ಹಿಂದುವೆಂದು ತಿಳಿದು ಹತ್ಯೆಗೈದರು.ಟೋಪಿ ತೊಟ್ಟ ಮಗು ನಡುಗುತ್ತಾ ನೋಡುತ್ತಿತ್ತು
.
                                                                                
                                 ***************************************

ನೀನು ಮಗುವಾಗಿದ್ದಾಗ
ನಿನ್ನ ನಡೆ ಸರಿ ಇರಲೆಂದು
ನಿನ್ನ ಕೈ ಹಿಡಿದಿದ್ದೆ
ಮಗುವೇ......
ಬೆಳೆದು ಬೊಡ್ಡವನಾಗಿದ್ದೀಯಾ
ಈಗಲೂ ನಿನ್ನ ಕೈ ಹಿಡಿದಿದ್ದೇನೆ
ನನ್ನ ಹೃದಯದ ಮೇಲೆ
ನೀನಿಟ್ಟಿರುವ ಕಾಲನ್ನು......ತೆಗೆ.
                                                  



                                                                             -ಜಯಶಂಕರ್ ಬೆಳಗುಂಬ   

Friday, 15 February 2013

ಯುವಶಕ್ತಿಗೆ ಸರಳ ಸೂತ್ರ


ಫಲಿತಾಂಶಕ್ಕೆ ಅಭಿಮುಖರಾದ ಇಂದಿನ ಯುವಜನರಿಗೆ ಸ್ವಾಮೀಜಿಯ ಬಳಿ ಒಂದು ಸರಳವಾದ ಸೂತ್ರ ಇದೆ. ಈ ನಿಟ್ಟಿನಲ್ಲಿ, ನಾವು ಮಾಡಬಹುದಾದ ಮೂರು ಬಗೆಯ ಸೇವೆಗಳನ್ನು ಅವರು ಪಟ್ಟಿ ಮಾಡಿದ್ದಾರೆ. ಅದರಲ್ಲಿ ಮೊದಲನೆಯದು ದೈಹಿಕವಾದ ಸೇವೆ. ಅಂದರೆ ಅಶಕ್ತರ ದೇಹಾರೋಗ್ಯದ ಸಂರಕ್ಷಣೆ ಮತ್ತು ದೈಹಿಕ ನರಳಾಟದ ಸುಧಾರಣೆಗೆ ಅಗತ್ಯವಾದ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುವುದು. ಅದಕ್ಕಾಗಿ ಆಸ್ಪತ್ರೆಗಳು, ಅನಾಥಾಲಯಗಳು, ವೃದ್ಧಾಶ್ರಮಗಳನ್ನು ನಡೆಸುವುದು, ಆದಾಯ ತಂದುಕೊಡುವ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವುದು. ಮುಂದಿನ ಉನ್ನತ ಹಂತ ಬೌದ್ಧಿಕ ಸೇವೆ. ಶಾಲಾ ಕಾಲೇಜುಗಳನ್ನು ನಡೆಸುವುದು, ಜಾಗೃತಿ ಮತ್ತು ಸಬಲೀಕರಣ ಕಾರ್ಯಕ್ರಮಗಳನ್ನು ಈ ಹಂತ ಒಳಗೊಂಡಿದೆ.
ಅಂತಿಮವಾದ ಮತ್ತೊಂದು ಹಂತವೆಂದರೆ ಅತ್ಯಂತ ಉನ್ನತ ಮಟ್ಟವಾದ ಆಧ್ಮಾತ್ಮಿಕ ಸೇವೆ. ಈ ಬಗೆಯ ಸೇವಾ ಕೈಂಕರ್ಯಗಳನ್ನು ಕೈಗೊಳ್ಳುವಾಗ ಎದುರಾಗುವ ಅಪಾಯಗಳ ಬಗ್ಗೆ ನಮ್ಮನ್ನು ಎಚ್ಚರಿಸಲು ಸಹ ಸ್ವಾಮೀಜಿ ಮರೆತಿಲ್ಲ. ಮಾನವನ ಅಹಂ ಮತ್ತು ಸಮಸ್ಯೆಗಳನ್ನು ಸೃಷ್ಟಿಸುವಲ್ಲಿ ಅದರ ಅಸಾಧಾರಣ ಸಾಮರ್ಥ್ಯವನ್ನು ಅವರು ಚೆನ್ನಾಗಿಯೇ ಗ್ರಹಿಸಿದ್ದರು. ನಾವು ಹೇಗಿರಬೇಕೋ ಅದಕ್ಕಿಂತ ಉನ್ನತ ಮಟ್ಟದಲ್ಲಿ ನಮ್ಮನ್ನು ನಾವು ಕೂರಿಸಿಕೊಳ್ಳುವ ಬಗ್ಗೆಯೂ ಪದೇ ಪದೇ ಅವರು ಎಚ್ಚರಿಕೆ ನೀಡಿದ್ದಾರೆ.
`ಪೀಠದ ಮೇಲೆ ನಿಂತು ಬಡವನತ್ತ ಒಂದಿಷ್ಟು ಹಣ ಒಗೆಯುವುದು ಸರಿಯಲ್ಲ' ಎಂಬ ಅವರ ಉಕ್ತಿಯಂತೂ ದಂತಕತೆಯೇ ಆಗಿದೆ. ಸೇವಾ ಕಾರ್ಯ ಕೈಗೆತ್ತಿಕೊಳ್ಳುವುದು ಕೇವಲ ಸಮಾಜದ ಉದ್ಧಾರಕ್ಕಷ್ಟೇ ಅಲ್ಲ, ಅಂತಹ ಕಾರ್ಯ ನಡೆಸುವವರ ವಿಕಸನ ಮತ್ತು ಬೆಳವಣಿಗೆಯ ಸಲುವಾಗಿಯೂ ಅದು ಅಗತ್ಯ, ಸಮಾಜ ಸೇವೆಯ ಈ ಮಾರ್ಗವು ಆಧ್ಮಾತ್ಮಿಕ ವಿಕಸನದ ಅಂತಿಮ ಹಂತವೂ ಹೌದು ಎಂದು ಅವರು ತಿಳಿದಿದ್ದರು. `ಜನಸೇವೆಯೇ ಜನಾರ್ದನನ ಸೇವೆ' ಎಂಬ ಸ್ವಾಮೀಜಿಯ ಅದ್ಭುತವಾದ ಸಲಹೆಯಲ್ಲಂತೂ, ಅವರ ಎಲ್ಲ ಬಗೆಯ ಅತ್ಯುನ್ನತ ತತ್ವಚಿಂತನೆಯೂ ಅತ್ಯಂತ ಸರಳವಾಗಿ ಮಿಳಿತಗೊಂಡಿದೆ. ಈ ಹೇಳಿಕೆ ಒಂದು ಭಾವನಾತ್ಮಕವಾದ ನಿವೇದನೆಯಂತಿದ್ದು, ಸೇವಾ ಕಾರ್ಯವನ್ನು ಕೈಗೆತ್ತಿಕೊಳ್ಳಲು ಪ್ರೇರೇಪಣೆ ನೀಡುತ್ತದೆ.
ಸ್ವಾಮಿ ವಿವೇಕಾನಂದರು ಮತ್ತು ಅವರ ಸಂದೇಶಗಳನ್ನು ನಮ್ಮ ಯುವಜನರಲ್ಲಿ ಅಂತರ್ಗತ ಮಾಡಿಸುವುದು ಇಂದು ದೇಶ ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಮುಖಾಮುಖಿಯಾಗಲು ಇರುವ ಅತ್ಯಂತ ಸರಳವಾದ ಮಾರ್ಗ. ಪ್ರತಿ ಯುವಶಕ್ತಿಯೂ ತನ್ನೊಳಗಿನಿಂದಲೇ ಕಾರ್ಯಾರಂಭ ಮಾಡಬೇಕು. ಅಂತಹ ಕಾರ್ಯಕ್ಕಾಗಿ ತಮ್ಮ ವ್ಯಕ್ತಿತ್ವವನ್ನು ಸಿದ್ಧಗೊಳಿಸಿಕೊಳ್ಳಬೇಕು. ದೈಹಿಕವಾಗಿ, ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿ ನಾವು ಆ ಕಾರ್ಯಕ್ಕೆ ಬದ್ಧರಾಗಿದ್ದೇವೆ ಎಂಬ ಭರವಸೆ ಮೂಡಿಸುವಂತೆ ಇರಬೇಕು. ಯುವಜನರಿಗೆ ಸಮಾಜ ಸೇವೆಗಿಂತ ಉತ್ತಮವಾದ ಮಾರ್ಗದರ್ಶನ ಬೇರೆ ಯಾವುದಿದೆ?
ಆದರೆ ಸಮಾಜ ಸೇವೆಯು, ಲೌಕಿಕ ಹೊಣೆಗಾರಿಕೆಯನ್ನೆಲ್ಲ ತ್ಯಜಿಸಿ ಯಾವುದೋ ಕುಗ್ರಾಮದಲ್ಲಿ ಉಪವಾಸ ಕುಳಿತ ಮಾತ್ರಕ್ಕೆ ತಾನೇ ತಾನಾಗಿ ಆಗಿಬಿಡುವ ಕ್ರಿಯೆಯಲ್ಲ.  ಸಾಮಾಜಿಕ ಪ್ರಜ್ಞೆಯನ್ನು ಬಡಿದೆಬ್ಬಿಸಿ, ಅದನ್ನು ಪ್ರಾಯೋಗಿಕವಾದ ಕ್ರಿಯೆಯಲ್ಲಿ ತೊಡಗಿಸುವ ಮೂಲಕ ಈ ಕಾರ್ಯ ಆರಂಭವಾಗುತ್ತದೆ. ಇಂತಹ ಚಟುವಟಿಕೆಗಳಲ್ಲಿ ತೊಡಗುವವರು ಇತರರ ಅಗತ್ಯಗಳು ಮತ್ತು ಮಿತಿಗಳನ್ನು ಗಮನದಲ್ಲಿ ಇರಿಸಿಕೊಂಡಿರಬೇಕಾಗುತ್ತದೆ. ಹೀಗೆ ನಮ್ಮಳಗಿನಿಂದಲೇ ಆರಂಭವಾಗುವ ಈ ಕಾರ್ಯ ಕ್ರಮೇಣ ಅರ್ಹ ವ್ಯಕ್ತಿಗಳನ್ನೂ ಒಳಗೊಳ್ಳುತ್ತದೆ. ಇದು ನಮ್ಮ ಸಾಮಾಜಿಕ ಕಾರ್ಯಗಳ ಯಶಸ್ಸು ಮತ್ತು ಪ್ರಾಯೋಗಿಕತೆಗಾಗಿ ಯುವಜನರಿಗೆ ಸ್ವಾಮೀಜಿ ವಿವರಿಸಿರುವ ಒಂದು ಮಾರ್ಗ.
ಪ್ರತಿಯೊಬ್ಬರೂ ತಾವು ಏನಾಗಿರುವರೋ (ತಂತ್ರಜ್ಞಾನಿ, ವಿಜ್ಞಾನಿ, ಎಂಜಿನಿಯರ್, ವೈದ್ಯ ಇತ್ಯಾದಿ) ಆ ಕಾರ್ಯದಲ್ಲಿ ಇದ್ದುಕೊಂಡೇ ಸೇವಾ ಕಾರ್ಯದಲ್ಲಿ ತೊಡಗಬಹುದು. ನಮ್ಮ ಬದುಕಿನ ಪುಟ್ಟ ವೃತ್ತದಲ್ಲೇ ಏನನ್ನು ಬೇಕಾದರೂ ಸಾಧಿಸಲು ಸಾಕಷ್ಟು ಅವಕಾಶಗಳಿವೆ. ಸಣ್ಣ ಸಣ್ಣ ಬದಲಾವಣೆಗಳು ದೊಡ್ಡ ಕಾರ್ಯಕ್ಕೆ ಮುನ್ನುಡಿ ಬರೆಯುತ್ತವೆ. ಒಬ್ಬ ಒಳ್ಳೆಯ ಮತ್ತು ಪ್ರಾಮಾಣಿಕ ತಂತ್ರಜ್ಞಾನಿ, ವಿಜ್ಞಾನಿ, ಎಂಜಿನಿಯರ್ ಅಥವಾ ವೈದ್ಯ ಆಗಿರುವುದೇ ಉತ್ತಮ ಕಾರ್ಯದ ಆರಂಭ.
ಇಚ್ಛಾಶಕ್ತಿ ಹೊಂದಿದ, ಸಮರ್ಥರಾದ, ಲೌಕಿಕ ಜಂಜಾಟಗಳಿಂದ ಮುಕ್ತರಾದ, ಕೌಟುಂಬಿಕ ಬೇಡಿಕೆಗಳಿಗೆ ಸೀಮಿತವಾಗದ ಅದೃಷ್ಟಶಾಲಿಗಳು ಶಾಶ್ವತ ಯೋಜನೆಗಳನ್ನು ಕೈಗೆತ್ತಿಕೊಳ್ಳಬಹುದು ಮತ್ತು ಸಮಾಜ ಸೇವೆಯನ್ನು ಪೂರ್ಣಕಾಲಿಕವಾಗಿ ಮುನ್ನಡೆಸಲು ಮುಂದಾಗಬಹುದು.  ವೃತ್ತಿ ಬದುಕಿಗೆ ಸೀಮಿತ ಆಗದೆ ನಮ್ಮ ನಮ್ಮ ಪರಿಮಿತಿಗಳಲ್ಲೇ ಸಾಮಾಜಿಕ ಕ್ಷೇತ್ರಕ್ಕೂ ನಮ್ಮ ಕಾರ್ಯವನ್ನು ವಿಸ್ತರಿಸಿಕೊಳ್ಳುವ ಮೂಲಕ, ಸಾವಿರಾರು ಅರ್ಹ ಮತ್ತು ಆಸಕ್ತ ಯುವಜನರ ಗುಣಮಟ್ಟದ ಸಮಯವನ್ನು ಘನವಾದ ಕಾರ್ಯಗಳಲ್ಲಿ ತೊಡಗಿಸಬಹುದು. ಹೀಗೆ, ಸಾಮಾಜಿಕ ಚಟುವಟಿಕೆಗಳನ್ನು ಅರ್ಥ ಮಾಡಿಕೊಳ್ಳುವ ಮೂಲಕ ನಮ್ಮ ಸುತ್ತಮುತ್ತಲಿನವರ ಸಮಸ್ಯೆಗಳಿಗೆ ಮಾತ್ರವಲ್ಲ, ನಮ್ಮಳಗಿನ ಸಮಸ್ಯೆಗಳು ಮತ್ತು ಗೊಂದಲಗಳಿಗೂ ನಾವು ಉತ್ತರ ಕಂಡುಕೊಳ್ಳಬಹುದು ಎಂಬ ಸತ್ಯ ಅಂತಿಮವಾಗಿ ನಮಗೆ ಗೋಚರಿಸುತ್ತದೆ.
ಕೃಪೆ: ಪ್ರಜಾವಾಣಿ

Friday, 8 February 2013

ಸರಳ ಸುಭಗ ಶೈಲಿ


ಶ್ರೀ ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಅನೇಕ ಲೇಖನ, ಭಾಷಣ ಸಂದರ್ಶನಗಳನ್ನು ಕ್ರೋಡೀಕರಿಸಿ 'ಹೊಸ ವಿಚಾರಗಳು' ಎಂಬ ಶೀರ್ಷಿಕೆಯ ಅಡಿಯಲ್ಲಿ ಈ ಕೃತಿಯನ್ನು ಪ್ರಕಟಿಸಬೇಕೆಂದು ಆಶಿಸಿದ್ದರು. ಈಗ ತೇಜಸ್ವಿಯವರ ಅನುಪಸ್ಥಿತಿಯಲ್ಲಿ ಅವರ ಆಶಯದಂತೆ 'ಹೊಸ ವಿಚಾರಗಳು' ಎಂಬ ಕೃತಿಯನ್ನು ಓದುಗರ ಮುಂದಿಡುತ್ತಿದ್ದೇವೆ. ಇಲ್ಲಿರುವ ಲೇಖನಗಳನ್ನು ನೋಡಿ ಇವೆಲ್ಲವೂ ಈಗಾಗಲೇ ನಡೆದು ಹೋಗಿರುವ ಸಂಗತಿಗಳು ಎಂದು ಪ್ರಥಮ ನೋಟಕ್ಕೆ ನಿಮಗೆ ಅನ್ನಿಸಬಹುದು. ನಿಧಾನವಾಗಿ ಕಣ್ಣಾಡಿಸಿ, ಹಲವು ಘಟನೆಗಳು ಆಗಿ ಹೋಗಿದ್ದರೂ ಅವುಗಳ ಫಲಶ್ರುತಿಯನ್ನು ಈಗಲೂ ಅನುಭವಿಸುತ್ತಿರುತ್ತೇವೆ. ಇನ್ನು ಕೆಲವು ವಿಷಯಗಳು ಅಗ್ನಿಪರ್ವತಗಳಂತೆ ಸುಪ್ತವಾಗಿದ್ದು ಆಗೀಗ ಕೆಣಕಿದಾಗ ಭುಗಿಲೆಂದು ಮೇಲೇಳುತ್ತವೆ. ಇನ್ನು ಕೆಲವು ಸಮಸ್ಯೆಗಳು ಮಗ್ಗುಲ ಮುಳ್ಳಾಗಿ ನಿರಂತರ ಕಿರಿಕಿರಿ ಉಂಟು ಮಾಡುತ್ತಲೇ ಇರುತ್ತವೆ. ಇಂತಹ ಅನೇಕ ಜ್ವಲಂತ ಸಮಸ್ಯೆಗಳನ್ನು ತೇಜಸ್ವಿಯವರು ಅಪೂರ್ವ ಒಳನೋಟ ಸೂಕ್ಷ್ಮತೆಗಳಿಂದ ವಿಶ್ಲೇಷಿಸಿರುವುದನ್ನು ಕಾಣುತ್ತೇವೆ. ಆಗ ಅವು ದಿನನಿತ್ಯದ ಸಮಸ್ಯೆಗಳಾಗೇ ಕಾಣತೊಡಗುತ್ತವೆ. ಹೀಗೆ ಈ ಸಂಗ್ರಹದಲ್ಲಿ ಚರ್ಚಿತವಾಗಿರುವ ವಿಷಯಗಳು ತೇಜಸ್ವಿಯವರಿಗಿದ್ದ ಅಪಾರ ಜ್ಞಾನಸಂಪತ್ತು, ಯಾವುದನ್ನೇ ಆಗಲಿ ವಿನೂತನವಾಗಿ ವಿಶ್ಲೇಷಿಸುತ್ತಿದ್ದ ರೀತಿ, ಒಬ್ಬ ಲೇಖಕನಾಗಿ ಅವರಿಗಿದ್ದ ಸಾಮಾಜಿಕ ಜವಾಬ್ದಾರಿಯನ್ನು ಈ ಕೃತಿಯ ಲೇಖನಗಳು ಓದುಗರ ಮುಂದಿಡುತ್ತವೆ.
ಈ ಕೃತಿಯು ಅಗಣಿತ ವಿಚಾರಗಳ ಭಂಡಾರ. ತೇಜಸ್ವಿಯವರು ತಮ್ಮ ಜೀವಿತಾವದಿsಯಲ್ಲಿ ಚಿಂತಿಸಿ ಬರೆದ, ವೇದಿಕೆಗಳಿಂದ ಮಾತನಾಡಿದ ಹಾಗೂ ಸಕ್ರಿಯವಾಗಿ ಭಾಗವಹಿಸಿದ ಅವರ ಸಮಾಜಮುಖಿ ಮಾತು ಕೃತಿಗಳ ಸಮುಚ್ಚಯ. ಇವನ್ನು ಸುಲಭ ಓದಿಗೆ ಅನುಕೂಲವಾಗುವಂತೆ ಹಲವು ಶೀರ್ಷಿಕೆಗಳ ಅಡಿಯಲ್ಲಿ ವಿಂಗಡಿಸಲಾಗಿದೆ. ಯಾವುದೇ ವಿಷಯವನ್ನು ಎಲ್ಲಿಂದ ಆರಿಸಿ ಓದಿದರೂ ಅದೊಂದು ಪರಿಪೂರ್ಣ ಘಟಕವಾಗಿರುತ್ತದೆ. ತೇಜಸ್ವಿಯವರ ಉನ್ನತ ಆಲೋಚನಾ ಮಟ್ಟ ಹಾಗೂ ಅವನ್ನು ತಮ್ಮ ಜನಕ್ಕೆ ಸುಲಭವಾಗಿ ಅರ್ಥವಾಗುವಂತೆ ಹೇಳಿರುವ ಸರಳ ಸುಭಗ ಶೈಲಿ ಈ ಕೃತಿಯನ್ನು ಓದುಗರಿಗೆ ತುಂಬಾ ಆಪ್ತವಾಗಿಸುತ್ತದೆ.
ತೇಜಸ್ವಿಯವರು ತಮ್ಮ ಸುತ್ತಮುತ್ತಲಿನ ಪರಿಸರ ಹಳ್ಳಿ, ದಿಳ್ಳಿ, ರಾಜಕೀಯ ಆರ್ಥಿಕ, ಸಾಮಾಜಿಕ, ಸಾಹಿತ್ಯಿಕ ವಿಚಾರಗಳನ್ನು ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ವಿವೇಚಿಸಿದ್ದಾರೆ. ಗಹನವಾದ ವಿಷಯವನ್ನು ಸುಲಭವಾಗಿ ಹೇಳುವುದೇ ಅವರ ವೈಶಿಷ್ಟ್ಯವೆಂದು ಹೇಳಿದಾಗ ಗಂಭೀರ ಸಮಸ್ಯೆ, ಚಿಂತನೆಗಳನ್ನು ಸರಳೀಕೃತವಾಗಿಸಿದ್ದಾರೆಂದು ತಿಳಿಯಬಾರದು. 'ಅವರ ಗುರಿ ಗಹನವಾದ ವಿಚಾರಗಳನ್ನು ಸುಲಭವಾಗಿ ತಮ್ಮ ಜನರಿಗೆ ಅರ್ಥ ಮಾಡಿಸುವುದು'. ಈ ನಿಟ್ಟಿನಲ್ಲಿ ತೇಜಸ್ವಿಯವರು ಸಫಲರಾಗಿದ್ದಾರೆ. ಇದಕ್ಕೆ ಪೂರಕವಾಗಿ ಈ ಕೃತಿಯಿಂದಲೇ ಕೆಲವು ಅಂಶಗಳನ್ನು ತೆಗೆದುಕೊಂಡು, ವಿಶದೀಕರಿಸಬಹುದು. "ಯುವ ಬರಹಗಾರರಲ್ಲಿ ನಂಬಿಕೆ ಹುಟ್ಟಿಸಬೇಕು" ಎಂಬ ಲೇಖನದಲ್ಲಿ ಸಾಹಿತ್ಯ ರಚನೆಯ ಬಗ್ಗೆ ತೇಜಸ್ವಿಯವರ ಚಿಂತನೆಯನ್ನು ಅವರ ಮಾತುಗಳಲ್ಲೇ ನೋಡಿ. "ಸಾಹಿತ್ಯ ಮತ್ತು ಲೇಖನಗಳು ದಲಿತರ ಶೂದ್ರರ ಅನಿಸಿಕೆ ಮತ್ತು ಅಭಿವ್ಯಕ್ತಿಗಳಿಗೆ ವಾಹಕವಾಗಬೇಕೆನ್ನುವುದು ನಿಜ. ಆದರೆ ಅದೊಂದು ಲಲಿತ ಕಲೆ,(ಫೈನ್ ಆರ್ಟ್) ಅನ್ನುವುದನ್ನು ಮರೆತೇಬಿಟ್ಟರೆ ಹೇಗೆ? ಭಾಷೆಯ ಉಪಯೋಗದಲ್ಲಿನ ಕಲಾತ್ಮಕತೆಯನ್ನು ತ್ಯಜಿಸಿದರೆ ಅದರಲ್ಲಿ ಹರಿಯುವ ವಿದ್ಯುತ್ ನಿಂತು ಅದೊಂದು ಜಡವಾದ ತಂತಿಯಾಗುತ್ತದೆ. ಓದಿದವರ ಮನಸ್ಸಿನಲ್ಲಿ ಯಾವ ದೀಪವೂ ಹತ್ತಿಕೊಳ್ಳುವುದಿಲ್ಲ. ನಮ್ಮ ಸಾಮಾಜಿಕ ಕಳಕಳಿ ಮತ್ತು ಕಲೆಗಾರಿಕೆ ಇವೆರಡರಲ್ಲಿ ಯಾವುದನ್ನು ತ್ಯಜಿಸಿದರೂ ನಮ್ಮ ಬರವಣಿಗೆ ನಿರ್ಜೀವವಾಗುತ್ತದೆ." ಇದು ಎಲ್ಲ ಲೇಖಕರಿಗೂ ಮಾರ್ಗದರ್ಶಿಯಾಗಬಲ್ಲ ಮಾತುಗಳಾಗಿವೆ.
ತೇಜಸ್ವಿಯವರ ಕಾಳಜಿ ಸಾಹಿತ್ಯಕ್ಕೆ ಮಾತ್ರ ಸೀಮಿತವಲ್ಲ. ಅವರು ತಮ್ಮ ಜನರ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯ ಬಗ್ಗೆ ಇಟ್ಟುಕೊಂಡಿದ್ದ ಆಳವಾದ ಕಾಳಜಿಯ ದ್ಯೋತಕವಾಗಿ ಅವರು ಕಾಫಿ ಬೆಳೆಗಾರರನ್ನು ಕಾಫಿ ಬೋರ್ಡಿನ ಕಪಿ ಮುಷ್ಟಿಯಿಂದ ಬಿಡಿಸಿ ಕಾಫಿಗೆ ಮುಕ್ತ ಮಾರುಕಟ್ಟೆ ಸಿಗುವಂತೆ ಮಾಡಲು ತಮ್ಮ ಸಹ ಬೆಳೆಗಾರರೊಡನೆ ನಡೆಸಿದ ಹೆರಾಟ ಈಗ ಇತಿಹಾಸ. ಅವರ ಈ ಕಳಕಳಿ ತಮ್ಮ ಪರಿಸರದ ಕಾಫಿ ಬೆಳೆಗೆ ಮಾತ್ರ ಸೀಮಿತವಾಗದೆ ಅನೇಕ ವಿಧದ ಬೆಳೆಬೆಳೆಯುವ ಎಲ್ಲ ರೈತರ ಒಳಿತಿಗಾಗಿ, ರೈತರ ಹೆರಾಟಕ್ಕೆ ಬೆಂಬಲ, ರೈತರಿಗೆ ಸರ್ಕಾರದಿಂದಾಗುವ ಅನ್ಯಾಯ, ತಾರತಮ್ಯ, ಕಾರ್ಖಾನೆಗಳಿಂದ ರೈತರ ಶೋಷಣೆ ಇವೆಲ್ಲಕ್ಕೂ ತೇಜಸ್ವಿ ದನಿ ಎತ್ತಿರುವುದನ್ನು ಅವರ ಅನೇಕ ಬರಹಗಳಲ್ಲಿ ಕಾಣಬಹುದು.
ಒಂದಿಲ್ಲೊಂದು ಸಮಸ್ಯೆಗಳ ಬಲೆಯೊಳಗೆ ಸಿಲುಕಿ ತೊಳಲಾಡುವುದು ಮಾನವನಿಗೆ ಉಸಿರಾಟದಷ್ಟೇ ಸಹಜವೆಂದು ಕಾಣಿಸುತ್ತದೆ. ಅನೇಕ ಸಂಗತಿಗಳು ಬೂದಿ ಮುಚ್ಚಿದ ಕೆಂಡದಂತೆ ಸುಪ್ತವಾಗಿದ್ದು ಒಮ್ಮೆ ಕಿಡಿಕಾರಬಹುದು. ನೆಲಕ್ಕಾಗಿ ಹೆರಾಟ, ನೀರಿಗಾಗಿ ಹೋರಾಟ ಇವೆಲ್ಲ ಇಂದಿಗೂ ತೀರ್ಮಾನ ಕಾಣದ, ಸದಾ ಪಕ್ಕೆಯನ್ನು ತಿವಿಯುವ ಮುಳ್ಳುಗಳಾಗಿವೆ. ಈ ಸಂಕಲನದ "ಕೊಡಗನ್ನು ಗಮನಿಸಿ" ಎಂಬ ಬರಹ ಓದಿದರೆ ಇಂದು ಪ್ರತ್ಯೇಕ ಕೊಡಗು ರಾಜ್ಯದ ಕೂಗು ಏಕೆ ಎದ್ದಿದೆ ಎಂಬುದು ವಿಶದವಾಗುತ್ತದೆ. ಈ ಲೇಖನದಲ್ಲಿ ಮಾನ್ಯ ಗುಂಡೂರಾಯರ ಕಾಲದಲ್ಲಿ ನೆರೆ ರಾಜ್ಯದವರಿಗೆ ದೊರೆತ ಅನೇಕ ಆಹ್ವಾನಗಳಿಂದ ಕೊಡಗಿನ ಕಾಡುಗಳ ಮರಮುಟ್ಟು, ಗಂಧ, ದಂತಗಳ ಲೂಟಿ, ಕಾಡಿನ ನಾಶ, ನೆಲದ ಆಕ್ರಮಣ ಪ್ರಾರಂಭವಾಗಿದ್ದನ್ನೂ ಪರಿಣಾಮವಾಗಿ ಅಲ್ಲಿ ಕಾಫಿ ಚಳವಳಿ,  ಕೊಡಗು ಏಕೀಕರಣ ಚಳವಳಿ, ಕೊಡಗಿನ ಪರಿಸರ ರಕ್ಷಣೆಯ ಚಳವಳಿಗಳು ಪ್ರಾರಂಭವಾಗಿದ್ದನ್ನು ಲೇಖಕರು ವಿವರಿಸಿದ್ದಾರೆ. ಅಂದಿನಿಂದ ಇಂದಿನವರೆಗೆ ನಮ್ಮನ್ನು ರಾಜಕೀಯವಾಗಿ ಕಾಡುತ್ತಿರುವ, ಇಂದಿಗೂ ಪರಿಹಾರ ಕಾಣದ ಸಮಸ್ಯೆಯಾಗಿ ಕೊಡಗು ಉಳಿದಿರುವುದನ್ನು ಕಾಣಬಹುದು.
ಇಂದಿನ ಜಾಗತೀಕರಣ, ತಂತ್ರಾಂಶಗಳ ಕಾಲಮಾನದ ಬದಲಾದ ಆರ್ಥಿಕ ಪರಿಸ್ಥಿತಿಯಲ್ಲಿ ಇಂದು ಯುವ ಜನತೆಗೆ ಆರ್ಥಿಕ ಸ್ವಾತಂತ್ರ್ಯ, ವೈವಾಹಿಕ ಆಯ್ಕೆಯ ಸ್ವಾತಂತ್ರ್ಯ ಮೊದಲಿಗಿಂತ ಹೆಚ್ಚುಪಟ್ಟು ಸಿಕ್ಕಿದೆ. ಇಂದು ಅಂತರ್ಜಾತಿ ವಿವಾಹಗಳಿಗೆ ಆರ್ಥಿಕ ಸ್ವಾತಂತ್ರ್ಯ ಬಹು ಮುಖ್ಯ ಕಾರಣವೆನ್ನುವುದು ಸ್ಪಷ್ಟವಾಗಿದೆ. ಅಂತರ್ಜಾತಿ ವಿವಾಹಿತರ ಜವಾಬ್ದಾರಿ, ಸಂಪ್ರದಾಯಸ್ಥರು ಅಂತರ್ಜಾತಿ ವಿವಾಹಗಳಿಗೆ ಏಕೆ ವಿರೋಧ ಒಡ್ಡುತ್ತಾರೆ ಎನ್ನುವುದರ ಬಗ್ಗೆ ತೇಜಸ್ವಿಯವರು ಹೇಳಿರುವುದನ್ನು ನೋಡಿ. "ಯಾವ ಕ್ರಮದ ವಿವಾಹವೇ ಆಗಲಿ, ಅದರ ಸಫಲತೆ, ವಿಫಲತೆಗಳಿಗೆ ಕಾರಣಗಳನ್ನು ಗಂಡುಹೆಣ್ಣಿನ ವ್ಯಕ್ತಿ ವೈಲಕ್ಷಣಗಳಲ್ಲಿ ಹುಡುಕಬೇಕೇ ಹೆರತು ಅವರ ವಿವಾಹ ಕ್ರಮದಲ್ಲಿ ಹುಡುಕುವುದು ವ್ಯರ್ಥ. ಮದುವೆಯಿಂದ ಅತಿಯಾಗಿ ಅಪೇಕ್ಷಿಸಿದೆ, ತಾಳ್ಮೆ ಸಂಯಮದಿಂದ ಬದುಕುವುದಕ್ಕೆ ಪರ್ಯಾಯ ಯಾವುದೂ ಇಲ್ಲ. ಈ ಕನಿಷ್ಠ ಶಿಸ್ತು ಇಲ್ಲದಿದ್ದಲ್ಲಿ ಅಂತರ್ಜಾತೀಯ ವಿವಾಹವಾದರೂ ಕಲಹ ವೈಮನಸ್ಯಗಳು ತಪ್ಪಿದ್ದಲ್ಲ, ಸಂಪ್ರದಾಯ ಬದ್ಧವಾಗಿ ಆದರೂ ತಪ್ಪಿದ್ದಲ್ಲ."
ತೇಜಸ್ವಿಯವರು ತಮಗೆ 'ಪಂಪ ಪ್ರಶಸ್ತಿ' ಬಂದಾಗ ಸಂದರ್ಶವೊಂದರಲ್ಲಿ ಹೇಳಿದ ಮಾತುಗಳು ಹೀಗಿವೆ. "ನಮ್ಮ ಅಂತಿಮ ಸವಾಲು ಇರೋದು ಪ್ರಶಸ್ತಿ ಗೆಲ್ಲೋದರಲ್ಲಿ ಅಲ್ಲ, ಓದುಗರನ್ನು ತಲುಪುವುದರಲ್ಲಿ. ಭಾಷೆ, ಸಾಹಿತ್ಯ ಎರಡೂ ಕಮ್ಯೂನಿಕೇಷನ್‌ಗೇ ಇರೋದು. ಬರೆದು ಗೆಲ್ಲ ಬೇಕೇ ವಿನಃ ಪ್ರಶಸ್ತಿಯ ಬೆನ್ನು ಹತ್ತಬಾರದು."
ಮೇಲಿನ ಮಾತುಗಳನ್ನು ನೆನೆಯುತ್ತಾ ತೇಜಸ್ವಿಯವರ 'ಹೊಸ ವಿಚಾರಗಳು' ಎಂಬ ಈ ಕೃತಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ಓದುಗುರ ಮೆಚ್ಚುಗೆ, ಪ್ರೋತ್ಸಾಹವೇ ನಮ್ಮ ಪ್ರಕಾಶನಕ್ಕೆ ದೊಡ್ಡ ಪ್ರಶಸ್ತಿಯೆಂದು ನಂಬಿದ್ದೇವೆ.ಇನ್ನೂ ಕೆಲವು ಲೇಖನಗಳು ನಮಗೆ ದೊರೆಯದೆ ಇದ್ದಿರಬಹುದು. ಓದುಗರಿಗೆ ದೊರೆತು ಕಳಿಸಿದರೆ ಸಾಹಿತ್ಯಾಸಕ್ತ ಅಭಿಮಾನಿಗಳಿಗೆ ತುಂಬಾ ಉಪಕಾರವಾದೀತು.

ಮುಖವಾಡವಿಲ್ಲದ ಬದುಕು

ಇದೀಗ ಕಳಚಿಟ್ಟಿದ್ದೇನೆ.

ಎಷ್ಟೊಂದು ಮುಖವಾಡ
ಚಣಕ್ಕೂಂದು ಪಾತ್ರ,
ನೋವಲ್ಲೂ ನಲಿವು
ದಾಕ್ಷಿಣ್ಯಕ್ಕಿದ್ದ ಗೆಲುವು
ಅಬ್ಬಬ್ಬಾ!
ಶಾಂತ ಮನಸಿನ ಕಲರವ
ಸದ್ದು!
ಶಾಂತತೆಯೇ ಪರಮ ವೈರಿ
ಹೇಸಿಗೆಯ ಮಾತು
ತೋರಿಕೆಗೆ ಸಹ್ಯ
ಪ್ರತಿಭಟನೆ ಹೃದಯದ
ಮಿಡಿವ ಸಹಕಾರ

ಛೇ!
ಕುಟಿಲರತೆಯ ಕುಕ್ಕುಲತೆ
ಉಕ್ಕಿಸಿದ ಬದುಕು
ಈಗ
ಒಳಗೆ ಹೊರಗೆ ವೈರುಧ್ಯವಿಲ್ಲ

ಸ್ಥಂಭೀಭೂತ ದೇಹ
ಚಲನ ಆತ್ಮಕೆ ಸ್ಪಂದಿಸದು
ನಿಶ್ಚಲ ಶ್ವಾಸ
ದೇಹವಳಿದ ವಿಶ್ವಾಸ
ಜೀವ ಬಿಡುಗಡೆಯ ದೇಹಕೆ
ಇಲ್ಲವೇ ಜೀವನ?
ಅಭಿಪ್ರಾಯ ಭಿನ್ನ

ಆದರೆ
ಮುಖವಾಡವಿಲ್ಲದ ಬದುಕು
ಕಾಯದು
ನಿರ್ಜೀವ ಕಾಯದ್ದು.
-ಶ್ರೀನಿವಾಸ್ ಡಿ. ಶೆಟ್ಟಿ

Thursday, 31 January 2013

ಗುಲಾಬಿ ವರ್ಣನೆ ಹಾಗು ದೆಲ್ಲಿ ರೇಪ್


                    27-01-2013ರಂದು ಹಾಸನದ ಹಾಡ್ಲಹಳ್ಳಿ ಪಬ್ಲಿಕೇಷನ್ಸ್ ನಲ್ಲಿ ನಡೆದ "ಯುವಸಮುದಾಯದಲ್ಲಿ ಸಾಹಿತ್ಯಿಕ ಅಭಿರುಚಿ"ಎಂಬ ಗೋಷ್ಠಿಯಲ್ಲಿ ಹಿರಿಯ ಲೇಖಕಿ ಬಾನುಮುಷ್ತಾಕ್ ರವರು ಮಾಡಿದ ಮಾತುಕತೆಯ ಸಂಗ್ರಹರೂಪ


ಗುಲಾಬಿ ವರ್ಣನೆ ಹಾಗು ದೆಲ್ಲಿ ರೇಪ್



ಮೌನದ ರಾಜಕಾರಣ ಅಪಾಯಕಾರಿ.ಯಾವ ಕಡೆಯೂ ನಿಲ್ಲದೇ ಇರುವುದು ಕೂಡ ಒಂದು ಕಡೆ ನಿಲ್ಲುವುದೇ ಆಗಿರುತ್ತದೆ.ಸಾಹಿತಿಯಾದವನುಮೌನದ ಚಿಪ್ಪಿನಿಂದ ಹೊರಬರಬೇಕು..ಆತನ ಮೌನ ಹಲವು ಅಪಾಯಗಳಿಗೆ ಎಡೆ ಮಾಡಿಕೊಡುತ್ತದೆ.ಮೌನವೆಂಬುದು ನಿಜಕ್ಕೂ ಅಪಾಯಕಾರಿ.
  ಒಂದು ಕಾಡಿನಲ್ಲಿ ಸುಂದರವಾದ ಜಿಂಕೆಯಿದೆ.ಅದನ್ನು ಬೇಟೆಯಾಡಲು ರಾಜ ರಥದಲ್ಲಿದ್ದಾನೆ,ರಥದ ಹಿಂದೆ ಭಟರು ಓಡಿಬರುತ್ತಿದ್ದಾರೆ. ರೂಪಕದಲ್ಲಿ ಬರಹಗಾರನಾದವನು ಎಲ್ಲಿ  ಗುರುತಿಸಿಕೊಳ್ಳುತ್ತಾನೆ ಎಂಬುದು ಮುಖ್ಯ.ಜಿಂಕೆಯ ಜತೆ ಗುರುತಿಸಿಕೊಳ್ಳಬಹುದು.ರಥದ ಹಿಂದೆ ಓಡಿಬರುತ್ತಿರುವ ಹಿಂಬಾಲಕರ ಜತೆ ಗುರುತಿಸಿಕೊಳ್ಲಬಹುದು..ಬೇಟೆಯಲ್ಲಿ ನಿರತನಾಗಿರುವ ರಾಜನ ಜತೆ ಗುರುತಿಸಿಕೊಂಡು ಬಾಣದ ಜತೆ ಮಾತನಾಡಬಹುದು.ಇಲ್ಲಿ ವಿದ್ವಂಸಕತೆಯಿದೆ,ಸೌಂದರ್ಯದ ಪ್ರತೀಕವಾಗಿ ಜಿಂಕೆಯಿದೆ,ಹೊಗಳುಭಟ್ಟರಾಗಿ ಹಿಂಬಾಲಕರಿದ್ದಾರೆ,ನಮ್ಮ ಬರವಣಿಗೆಯ ಮೂಲವನ್ನು ಇದರಲ್ಲಿ ಗುರುತಿಸಬಹುದು.
  ಸಾಹಿತಿಯಾದವನು ಮಾತನಾಡುವುದಷ್ಟೇ ಅಲ್ಲ,ಏನು ಮಾತನಾಡುತ್ತಾನೆ ಎಂಬುದು ಮುಖ್ಯವಾದ ವಿಚಾರ.ದೆಹಲಿಯಲ್ಲಿ ಗ್ಯಾಂಗ್ ರೇಪ್ ನಡೆಯುತ್ತಿರುವಾಗ ಗುಲಾಬಿಯನ್ನು ವರ್ಣಿಸುತ್ತಾ ಕೂರುವುದು ಸರಿಯಾದ ಲಕ್ಷಣವಲ್ಲ. ನಿಟ್ಟಿನಲ್ಲಿ ಸಾಹಿತಿಗೆ ಸಾಮಾಜಿಕ ಜವಬ್ದಾರಿಯಿದೆ.
  ವಿಮರ್ಶಕರು ಹೇಳಿದ್ದಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು.ವಿಮರ್ಶಕರು ನಮ್ಮನ್ನು ಅವಲಂಬಿಸಿದವರು.ನಾವು ಬರೆದರೆ ಮಾತ್ರ ಅವರು ವಿಮರ್ಶಿಸುತ್ತಾರೆ.ನಮ್ಮ ಕೃತಿಗೆ ಓದುಗನೇ ನೇರ ವಿಮರ್ಶಕ.ಹೀಗಾಗಿ ವಿಮರ್ಶಕರನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆಯಿಲ್ಲ.ಯಾಕೆಂದರೆ ವಿಮರ್ಶಕರನ್ನು ಕೊಳ್ಳುವುದು ಸಾದ್ಯವಿದೆ.
 ಬರೆಯಲು ಹೊರಟವರು ಹತ್ತು ಸಾವಿರ ಗಂಟೆ ಓದಿರಬೇಕು.ಇದು ಬರಹವನ್ನು ಗಟ್ಟಿಗೊಳಿಸುತ್ತದೆ.ಗ್ರಹಿಕೆ ಅನ್ನುವುದು ಲೇಖಕನ ಮೂಲ ದ್ರವ್ಯ.ಪ್ರತಿಯೋಂದು ವಿಚಾರವನ್ನು ಸೂಕ್ಷವಾಗಿ ಗ್ರಹಿಸುವುದು ಅವಶ್ಯಕ.ಸೂಕ್ಷ್ಮ ಗ್ರಹಿಕೆಯಿಲ್ಲದೇ ಬರವಣಿಗೆ ಅಸಾದ್ಯ.
  ನಾನು ವಕೀಲಿ ವೃತ್ತಿಯಿಂದ ಸಾಕಷ್ಟು ಅನುಕೂಲವನ್ನು ಪಡೆದಿದ್ದೇನೆ.ಕಕ್ಷಿದಾರರು ಏನ್ನೂ ಮುಚ್ಚಿಡದೇ ಎಲ್ಲವನ್ನು ಹೇಳುವುದರಿಂದ ನನಗೆ ಸಾಕಷ್ಟು ಸಾಮಗ್ರಿ ಸಿಗುತ್ತದೆ.ಒಮ್ಮೆ ಗಂಡ ಹೆಂಡತಿ ವಿಚ್ಚೇದನಕ್ಕೆ ಸಂಬಂದಿಸಿದಂತೆ ಬಂದಿದ್ದರು.ತನ್ನ ವಿದವೆ ತಾಯಿ ಹಾಗು ಹೆಂಡತಿಯ ನಡುವೆ ಹೋದಾಣಿಕೆ ಇಲ್ಲದ್ದರಿಂದ ಗಲಾಟೆ ವಪರೀತವಾಗಿತ್ತು.ಅವರು ನನ್ನೆದುರಿಗೆ ಅವರು ನನ್ನೆದುರಿಗೆ ಅವರ ಖಾಸಗಿ ಕೋಣೆಯಲ್ಲಿ ಗಲಾಟೆ ಮಾಡುವಂತೆ ಮಾಡುತ್ತಿದ್ದರು.ತನ್ನ ತಾಯಿಯನ್ನು ಕುರಿತು ಮಾತನಾಡುತ್ತಾ...ನನ್ನ ಅಮ್ಮನಿಗೆ ಪಂಜಾಬಿ ಡ್ರೆಸ್ ಹಾಕಿಸುತ್ತೇನೆ,ಮತ್ತೆ ಮದುವೆ ಬೇಕಾದರೂ ಮಾಡುತ್ತೇನೆ ಎಂದು ಘಂಟಾಗೋಷವಾಗಿ ಹೇಳಿದನು.ಒಬ್ಬ ಮಗ ತನ್ನ ತಾತಿಯ ಮರುಮದುವೆ ಬಗ್ಗೆ ಮಾತನಾಡುವುದು ಅಷ್ಟು ಸುಲಬದ ಮಾತಲ್ಲ.ಅದೇ ನನಗೆ ಒಂದು ಕತೆಯ ವಸ್ತುವಾಯಿತು.
  ನಾವು ಬರೆಯುವಾಗ ನಮ್ಮ ಕ್ಷೇತ್ರ ಯಾವುದು ಎಂಬುದು ಬಹಳ ಮುಖ್ಯ.ನನಗೆ ಕವನ ಅಷ್ಟಾಗಿ ಒದಗಿ ಬರಲಿಲ್ಲ.ನನಗೆ ಅನಿಸಿದ್ದನ್ನು ಗದ್ಯದಲ್ಲಿ ಹೇಳುವಂತೆ ಪದ್ಯದಲ್ಲಿ ಹೇಳಲಾರೆ ಎಂಬುದು ಗೊತ್ತಿದೆ.ಎಲ್ಲಾ ಪ್ರಕಾರಗಳಲ್ಲೂ ಶಕ್ತವಾಗಿ ಬರೆಯುವವರಿದ್ದಾರೆ.ಅದು ಅವರ ಶಕ್ತಿ.
  ಈಗ ಆತ್ಮಕತೆಗಳು ತುಂಬಾ ಬರುತ್ತಿವೆ.ಆತ್ಮಚರಿತ್ರೆ ಎಂಬುದು ದಿನಚರಿತೆಯ ಚರಿತ್ರೆಯಾಗಬಾರದು.ಇದೂವರಗೆ ವಾಸ್ತವತೆಯನ್ನು ಮರೆಮಾಷಚುವ ಕೆಲಸ ನಡೆಯುತ್ತಿತ್ತು.ಈಗ ಸಾಮಾಜಿಕವಾಗಿ ಪ್ರಮುಖವಲ್ಲದ ಕಾಸಗಿ ವಿಷಯಗಳು ಬ್ರೇಕಿಂಗ್ ನ್ಯೂಸಿನಂತೆ ಬಿಕರಿಯಾಗುತ್ತಿವೆ.ಇದಕ್ಕಾಗಿ ಓದುವವರು ತುಂಬಾ ಚೂಸಿಯಾಗಿರಬೇಕು.
  ನನಗೀಗ ನಿವೃತ್ತಿ ಬೇಕು ಅಂತಾ ಮನೆಯವರಿಗೆ ಹೇಳಿರುವೆನಾದರೂ ಸಾಹಿತ್ಯಿಕ ವಸ್ತುಗಳಿಗಾಗಿ,ಸಾಮಾಜಿಕ ಕಾರ್ಯಗಳಿಗಾಗಿ ವಕೀಲಿವೃತ್ತಿಯನ್ನು ಮುಂದುವರೆಸುತ್ತೇನೆ.ಯಾರಾದರೂ ಅಷ್ಡೇ ಬರವಣಿಗೆಯ ಅಭ್ಯಾಸದಲ್ಲಿ ದುಡಿಮೆಯನ್ನು ನಿರ್ಲ್ಯಕ್ಷಿಸಬಾರದು.ಸಾಹಿತ್ಯಬರವಣಿಗೆ ನಮ್ಮ ಪ್ರಮುಖ ಆದಾಯ ಮೂಲವಾಗಿ ರೂಪುಗೊಂಡಿಲ್ಲ.ತಮ್ಮ ಬದುಕಿನ ಅವಶ್ಯಕತೆಗಾಗಿ ಬರವಣಿಗೆಯ ಜೊತೆಗೆ ಪ್ರಮುಖ ವೃತ್ತಿಯೂ ಅಗತ್ಯವಾಗಿರಬೇಕು.

Tuesday, 29 January 2013

ಈ ಹಿಂದೆ ನಾನು ನಿಮ್ಮವನೇ........!

 "ಇದನ್ನು ಎಂದೋ ಬರೆಯಬೇಕಿತ್ತು" ಎಂದೆ. ಮುಖದಲ್ಲಿ ನಿರಾಳತೆಯಿರಲಿಲ್ಲ. "ಎಂದೋ" ಹೇಳಿದ್ದರೆ ಇಷ್ಟೊತ್ತಿಗೆ ಕ್ರಾಂತಿಯಾಗಿ ಸುಖಿ ವ್ಯವಸ್ಥೆಯಲ್ಲಿ ಬದುಕಬಹುದಿತ್ತು ಎನ್ನುವುದು ನನ್ನ ಹೇಳಿಕೆಯಾಗಿತ್ತು. ಹೋಗಲಿ ಇಂದಾದರೂ ಹೇಳಿದ್ದೇನಲ್ಲ ಎಂದು ಕೊಳ್ಳಬಹುದಿತ್ತು. ನಾಳೆಯ ಬಗ್ಗೆ ಬೇರೆಯವರಿರಲಿ ನಾನೇ ಗ್ಯಾರಂಟಿ ಕೊಡುವುದಿಲ್ಲ, ಹಾಗಾಗಿ ನಾನು ಕಳೆದ ವರ್ಷ, ನೆನ್ನೆ, ಹಿಂದಿನ ಕ್ಷಣದಲ್ಲಿ ಜೀನಿಯಸ್ ಆಗಿದ್ದೆ. ಈಗ ಮತ್ತು ನಾಳೆ ಮುಂದಿನ ದಿನಗಳಲ್ಲಿ ನಾನು ಮಾಡಿದ ಸಾಲ ಮನ್ನಾ ಆಗುವ ನಿರೀಕ್ಷೆಯ ಸಾಮಾನ್ಯ.
ನಾನು ಹಿಂದಿನ ದಿನಗಳಲ್ಲಿ ತುಂಬಾ ಬರೆದಿದ್ದೆ. ಬರೆದದ್ದನ್ನು ಒಪ್ಪಿದ್ದೆ. ಅದೆಲ್ಲಾ ಓದಿಕೊಂಡಿದ್ದರ ಪರಿಣಾಮವಾಗಿ ಕ್ರಾಂತಿ ನನಗೆ ಸುಲಭವಾಗಿತ್ತು. ನನ್ನ ಸಲಹೆಗಳು ಜಗತ್ತನ್ನು ಬದಲಿಸಿ ಬಿಡುವಷ್ಟು ಪರಿಣಾಮಕಾರಿಯಾಗಿಯೂ ಇದ್ದವು. ನಾನು ಹೇಳುವುದನ್ನು ಕೇಳಿ ಗೌರವದಿಂದ ನನ್ನ ಕಡೆ ನೋಡುತ್ತಿದ್ದರು.ಹೀಗೆ ಎಲ್ಲವೂ ಸರಿಯಾಗಿತ್ತು. ನಾನು ಕೆಲಸ ಅಂತ ಹಿಡಿಯುವವರೆಗೆ. ಈಗ ನನಗೆ ನನ್ನ ಕೆಲಸವಷ್ಟೇ ಮುಖ್ಯವಾಗಿರುವುದರಿಂದ ನನ್ನ ಪರವಾಗಿ ಅಣ್ಣಾ ಹಜಾರೆಯನ್ನು ಉಪವಾಸ ಕೂರಿಸಿದ್ದೇನೆ.
ನಾನು ತುಂಬಾ ಒಳ್ಳೇ ಮನುಷ್ಯನೇನೂ ಆಗಿರಲಿಲ್ಲ. ಏಕೆಂದರೆ ನನಗೆಲ್ಲಾ ಗೊತ್ತಿತ್ತು.. ಯಾರೇ ಆಗಿರಲಿ ತಪ್ಪಿದ್ದರೆ ಝಾಡಿಸುತ್ತಿದ್ದೆ.ನನ್ನ ಮುಂದಿನದೇ ಪ್ರಪಂಚವಾಗಿದ್ದರಿಂದ ತಪ್ಪುಗಳು ನಡೆಯುತ್ತಿರಲಿಲ್ಲ. ಇಪ್ಪತ್ತೇಳನೇ ವಯಸ್ಸು ಖಾಯಂ ಅಲ್ಲವಲ್ಲ. ಹಾಗಾಗಿ ನಾನು ಕೂಡ ಒಳ್ಳೆಯ ಮನುಷ್ಯ. ನನ್ನ ಮುಂದಿನದು ಕ್ಷಣದಲ್ಲಿ ಬದಲಾಗುವ ದೃಶ್ಯ. ಅದು ಪ್ರಪಂಚವಲ್ಲ .ತಪ್ಪುಗಳು ಸಹಜ ಎಂದು ನನ್ನ ಮೂಲಕವೇ ಮತ್ತು ನನ್ನಿಂದಲೇ ತಪ್ಪಗಳಾಗುತ್ತಿವೆ. ಒಳ್ಳೆ ಮನುಷ್ಯನಾದ ಮೇಲೆ ಗಾಂಧಿಯ ಆತ್ಮ ಚರಿತ್ರೆಯನ್ನು ಜತೆಯಲ್ಲಿ ಇಟ್ಟುಕೊಳ್ಳುತ್ತೇನೆ.
ಇದನ್ನೆಲ್ಲಾ ನಿರಾಶಾವಾದ ಅಂದು ಕೊಂಡಿರಾದರೆ ನನ್ನ ಅಭ್ಯಂತರವಿಲ್ಲ. ಯಾಕೆಂದರೆ ನಿಮ್ಮ ಬಗ್ಗೆ ಮರುಕ ಪಡುವಷ್ಟು ಶಕ್ತವಾಗಿದ್ದೇನೆ. ಬೇಕಿದ್ದರೆ ಪಂಥ ಕಟ್ಟಿ ಇದೇ ಆಶಾವಾದ ಎಂದು ನಿಮಗೆ ಮನವರಿಕೆ ಮಾಡುತ್ತೇನೆ. ನೀವೂ ಸಹ ನನ್ನ ದಾರಿಗೆ ಬನ್ನಿ ಯಾಕೆಂದರೆ.....................
         ಹಿಂದೆ ನಾನೂ ನಿಮ್ಮ ಹಾದಿಯಲ್ಲಿದ್ದವನೇ.

         



                                                                                                                                -ಚಲಂ 


Saturday, 26 January 2013

ಎತ್ತು


ಎತ್ತು ನೇಗಿಲೊತ್ತು ಸಾಗುತ್ತಿದೆ
ಜಗದ ಎಲ್ಲಾ ಭಾರವನು ಹೊತ್ತು||ಪ||

ಕಾಳು ಕಾಳಿಗೂ ಸುರಿಸುತ್ತಿದೆ
ಹನಿ ಹನಿ ಬೆವರು
ಸಾಲು-ಸಾಲುಗಳಿಗೂ ಕೂಡ
ಕಟ್ಟಿದೆ ಬೆವರಿನಾ ಕಡಲು
ತುಂಬಿಸಲೆಂದು ಜಗದ ಒಡಲು ||1||

ಹಗ್ಗದ ಬಿಗಿಯಲ್ಲಿಯೇ ನೆಡೆಯುತ್ತಿದೆ
ಬದಿಯ ಒಳಗೆ
ಕಳೆಯ ಕಿತ್ತು ಹೆಂಟೆ ಹೊಡೆದು
ಸಸಿಗೆ ಸ್ಥಾನವನಿತ್ತು ||2||

ಚಾಟಿ ಏಟನು ಕೂಡ ಸಹಿಸಿದೆ
ಒಡೆಯನಾ ವರವೆಂದು
ಗೇಯುತ್ತಿದೆ ಹೊತ್ತು ಮರೆತು
ಜಗದ ಭಾರವನು ಅರಿತು.||3||

ಹೆಗಲು ಕೊರೆಯುತ್ತಿದೆ
ಮಂಡಿ ಬಾಗುತ್ತಿದೆ,
ಬೆನ್ನ ಚಕ್ಕಳಿಕೆ ಮೇಲೆಳುತ್ತಿದೆ
ಆದರೂ ಸಾಗುತ್ತಿದೆ ಎತ್ತು
ಜಗದ ಒಡಲ ಭಾರ ಹರಿತು.||4||
                                        ಪ್ರದೀಪ್.ಹೆಚ್.ಡಿ